ತರಗತಿ -
	ಬೋಧನೆಯ ಅನುಕೂಲಕ್ಕಾಗಿ ಗುಂಪಿಸುವ ಸಮಾನ ಲಕ್ಷಣಗಳುಳ್ಳ ವಿದ್ಯಾರ್ಥಿ ಸಮೂಹ (ಕ್ಲಾಸ್), ಕೇವಲ ಪವಿತ್ರ ಧಾರ್ಮಿಕ ಸಾಹಿತ್ಯವೊಂದೇ ವ್ಯಾಸಂಗ ವಿಷಯವಾಗಿದ್ದು, ಕಂಠಪಾಠಕ್ರಮವೇ ಪ್ರಧಾನ ಬೋಧನ ವಿಧಾನವಾಗಿದ್ದ ಪ್ರಾಚೀನ ಕಾಲದಲ್ಲಿ ತರಗತಿಯ ವ್ಯವಸ್ಥೆ ಅನಿವಾರ್ಯವೆನಿಸಿರಲಿಲ್ಲ. ಅಧ್ಯಾಪಕರು ತಮಗೆ ಸಾಧ್ಯವೆನಿಸುವಷ್ಟು ವಿದ್ಯಾರ್ಥಿಗಳನ್ನು ಮಾತ್ರ ಸೇರಿಸಿಕೊಂಡು ಅವರಿಗೆಲ್ಲ ಒಟ್ಟಾಗಿ ಒಂದು ಗುಂಪಿನಲ್ಲಿ ಪಾಠ ಮಾಡಿ ಕಂಠಪಾಠ ಮಾಡಿಸುತ್ತಿದ್ದರು. ಎಲ್ಲರೂ ಒಂದೇ ವಿಷಯವನ್ನು ಕಲಿಯುತ್ತಿದ್ದುದರಿಂದ ಎಲ್ಲರಿಗೂ ಒಟ್ಟಾಗಿ ಹೇಳಿಕೊಡುತ್ತಿದ್ದರು. ಆ ಗುಂಪಿನಲ್ಲಿ ಹೊಸಬರೂ ಹಳಬರೂ ಇರುತ್ತಿದ್ದರು. ಹೊಸಬರಿಗೆ ಪ್ರಥಮ ಪಠನವಾಗುತ್ತಿದ್ದರೆ ಹಳಬರಿಗೆ ಅದು ಪುನರಾವರ್ತನೆಯಾಗಿ ದೃಢೀಕರಣಕ್ಕೆ ನೆರವಾಗುತ್ತಿತ್ತು. ನೂತನ ರೀತಿಯ ಪಠ್ಯವಸ್ತುಗಳು ಆಚರಣೆಗೆ ಬಂದಂತೆ, ವಿದ್ಯಾರ್ಥಿಗಳಲ್ಲಿ ಬೇರೆ ಬೇರೆ ವಿಷಯಗಳಲ್ಲಿ ಆಸಕ್ತಿ ಮೂಡಿದಂತೆ ಆಯಾ ವಿಷಯದ ವ್ಯಾಸಂಗದವರನ್ನು ಒಂದು ಗುಂಪಾಗಿ ಮಾಡಿ ಪಾಠ ಹೇಳುವುದು ಅನಿವಾರ್ಯವಾಯಿತು. ಇದು ಆಧುನಿಕ ತರಗತಿಯ ಉದಯಕ್ಕೆ ಮೊದಲ ಯತ್ನವಾಯಿತೆಂದು ಭಾವಿಸಬಹುದು. ವಿದ್ಯಾಭ್ಯಾಸದಲ್ಲಿ ಆಸಕ್ತಿ ಮೂಡಿ ಶಿಕ್ಷಣಕ್ಕೆ ಬರತಕ್ಕ ಮಕ್ಕಳ ಸಂಖ್ಯೆ ಹೆಚ್ಚಿ ಸಾರ್ವಜನಿಕ ಶಾಲೆಗಳು ಆರಂಭವಾದಂತೆ ವಿವಿಧ ವಿಷಯಗಳ ಬೋಧನೆ ಪಠ್ಯಕ್ರಮದಲ್ಲಿ ಸೇರಿಕೊಂಡಂತೆ ವಿಷಯ, ವಯಸ್ಸು, ಸಂಖ್ಯೆ-ಇವುಗಳ ಪರಿಮಿತಿಯೊಳಗೆ ವಿದ್ಯಾರ್ಥಿಗಳನ್ನು ವರ್ಗೀಕರಿಸುವ ಅನಿವಾರ್ಯ ಹೆಚ್ಚಿತು. ಪ್ರತಿ ವಿಷಯಕ್ಕೂ ಒಂದು ತರಗತಿ, ಪ್ರತಿ ಹಂತದ ಶಿಕ್ಷಣಕ್ಕೂ ಒಂದು ತರಗತಿ, ಬೋಧನೆಗೆ ಅನಾನುಕೂಲವಾಗದಂತೆ ವಿದ್ಯಾರ್ಥಿ ಸಂಖ್ಯೆಯನ್ನು ಮಿತಿಗೊಳಿಸಿದ ತರಗತಿ-ಹೀಗೆ ತರಗತಿಗಳನ್ನು ವಿಂಗಡಿಸುವುದು ಆರಂಭವಾಯಿತು. ಆಧುನಿಕ ಕಾಲದಲ್ಲಿ ಈ ವಿಧಾನ ಕ್ರಮ ಕ್ರಮವಾಗಿ ಸುಧಾರಿಸುತ್ತ ಮುನ್ನಡೆದಿದೆ.

	ಶಿಕ್ಷಣ ಸೇವಾ ವ್ಯವಸ್ಥೆಯಲ್ಲಿ ಶಾಲೆ ಒಂದು ಮೂಲ ಘಟಕವಾದರೆ ತರಗತಿ ಬೋಧನ ಕಾರ್ಯಕ್ಕೆ ಒಂದು ಮೂಲ ಘಟಕ. ಈಚೆಗೆ ಶಾಲೆಗೆ ಬರತಕ್ಕವರ ಸಂಖ್ಯೆ ಹೆಚ್ಚಿದೆ; ಸಮಾಜ ಜೀವನ ಸಂಕೀರ್ಣವಾಗಿ ಶಾಲೆಗೆ ಬರತಕ್ಕವರಲ್ಲಿ ವಿವಿಧ ಮಟ್ಟದ ಶಿಕ್ಷಣ ಪಡೆದವರೂ ವಿವಿಧ ಮಟ್ಟದ ಬುದ್ಧಿಶಕ್ತಿಯವರೂ ವಿವಿಧ ರೀತಿಯ ಸಾಮಾಜಿಕ ಹಿನ್ನಲೆಯವರೂ ಇರುತ್ತಾರೆ. ಶಿಕ್ಷಣ ತತ್ತ್ವಚಿಂತಕರು ಮಕ್ಕಳು ಶಾಲೆಯಲ್ಲಿ ಬರೀ ವಿಷಯ ಜ್ಞಾನವನ್ನು ಪಡೆದರೆ ಸಾಲದು, ಅಲ್ಲಿ ಸಾಮಾಜಿಕ ಜೀವನವನ್ನೂ ನಡೆಸಬೇಕು ಎಂದು ಪ್ರತಿಪಾದಿಸಿದ್ದರಿಂದ ಶಾಲೆ ಒಂದು ಕಿರಿಯರ ಸಮಾಜವಾಗಿ ಕೆಲಸ ಮಾಡಬೇಕಾಗಿ ಬಂತು. ಆದರೆ ಅಲ್ಲಿ ಬೋಧಿಸುವ ವಿಷಯಗಳ ಸಂಖ್ಯೆ ಮತ್ತು ಅಂತಸ್ತು ಹೆಚ್ಚಿದಂತೆ ಸಾಮಾಜಿಕ ಸನ್ನಿವೇಶಗಳಲ್ಲಿ ಪ್ರತಿಯೊಂದು ವಿಷಯವನ್ನೂ ಪ್ರತಿಯೊಂದು ಅಂತಸ್ತಿನಲ್ಲೂ ಬೋಧಿಸಲು ಅನುಕೂಲಿಸುವಂತೆ ವಿದ್ಯಾರ್ಥಿಗಳನ್ನೂ ವರ್ಗೀಕರಿಸುವುದು ಈಗ ಎಲ್ಲ ಕಡೆಯೂ ಪ್ರಚಾರದಲ್ಲಿದೆ.

	ಸಾರ್ವತ್ರಿಕ ಶಿಕ್ಷಣ ಪ್ರಚಾರಕ್ಕೆ ಬಂದು ಅಧಿಕ ಸಂಖ್ಯೆಯಲ್ಲಿ ಮಕ್ಕಳು ಶಿಕ್ಷಣಕ್ಕೆ ಬರುತ್ತಿರುವುದರಿಂದ ಬೋಧನೆಗೆ ವ್ಯವಸ್ಥೆ ಮಾಡುವಾಗ 40-50 ಮಂದಿಯನ್ನು ಒಟ್ಟಾಗಿ ವಿಂಗಡಿಸಿಕೊಂಡು ಸಾಮೂಹಿಕವಾಗಿ ಪಾಠ ಮಾಡುವುದು ಆರ್ಥಿಕ ದೃಷ್ಟಿಯಿಂದ ಅಗತ್ಯವಾದಂತೆ ಬೋಧನೆಯ ದೃಷ್ಟಿಯಿಂದಲೂ ಅಗತ್ಯವೆನಿಸಿದೆ. ಹೀಗೆ ತರಗತಿಯನ್ನು ವಿಂಗಡಿಸುವಾಗ ಶಿಕ್ಷಣಾಭಿವೃದ್ಧಿಯಲ್ಲಿ ಸಮಾನ ಮಟ್ಟವನ್ನು ಸಾಧಿಸಿರುವವರನ್ನೆಲ್ಲ ಒಟ್ಟುಗೂಡಿಸಿ ತರಗತಿಯಾಗಿ ವಿಂಗಡಿಸುವುದು ಸಾಮಾನ್ಯವಾಗಿ ಎಲ್ಲ ಕಡೆಯೂ ಪ್ರಚಾರದಲ್ಲಿರುವ ವಿಧಾನ. ಆದರೆ ವಿಷಯ ಜ್ಞಾನದಂತೆ ವ್ಯಕ್ತಿತ್ವದ ಬೆಳೆವಣಿಗೆಯ ಸ್ವರೂಪವನ್ನೂ ಆಧಾರ ಮಾಡಿಕೊಳ್ಳಬೇಕೆಂಬ ವಾದ ಈಚೆಗೆ ಪ್ರಾಧಾನ್ಯಕ್ಕೆ ಬಂದು, ತರಗತಿಯ ವಿಂಗಡಣೆಗೆ ಮಕ್ಕಳ ದೈಹಿಕ ಬೆಳೆವಣಿಗೆ ರಸಭಾವಗಳ ಸ್ವರೂಪ ಸಾಮಾಜಿಕ ಜೀವನದ ಮಟ್ಟ ಇವೆಲ್ಲವನ್ನೂ ಆಧಾರ ಮಾಡಿಕೊಳ್ಳುವುದು ಬಳಕೆಗೆ ಬರುತ್ತಿದೆ. ದೊಡ್ಡ ಶಾಲೆಯಲ್ಲಾದರೆ ಮೇಲಿನ ಸಮಾನ ಲಕ್ಷಣಗಳನ್ನು ಹೊಂದಿದ್ದು ಸಮಾನ ಮಟ್ಟದ ಶಿಕ್ಷಣಾಭಿವೃಧ್ದಿ ಸಾಧಿಸಿದವರು ತರಗತಿಯ ವಿಂಗಡಣೆಗೆ ಅಗತ್ಯವಾದಷ್ಟು ಮಂದಿ ಸಿಕ್ಕುವರು. ಆ ರೀತಿ ರೂಪುಗೊಳಿಸಿದ ತರಗತಿಗೆ ಬೋಧಿಸುವುದು ಸರಾಗವಾಗುವುದರ ಜೊತೆಗೆ ಸಮಾನರೂ ಅನುರೂಪರೂ ಆದ ಜೊತೆಗಾರೊಡನೆ ಮಕ್ಕಳು ಸಾಮೂಹಿಕ ಜೀವನ ನಡೆಸುತ್ತ ಕಲಿವನ್ನು ಸಾಧಿಸುವರು. ಆಗ ತರಗತಿ ಎಲ್ಲರಿಗೂ ಹಿತಕರವೆನಿಸುವ ಒಂದು ಪುಟ್ಟ ಸಮಾಜದಂತಿದ್ದು ಅವರ ವ್ಯಕ್ತಿತ್ವ ಸಮರಸವಾಗಿ ರೂಪುಗೊಳ್ಳಲೂ ಅವಕಾಶವಾಗುತ್ತದೆ.

	ಏಕರೀತಿಯ ಉದ್ದೇಶ, ಆಸಕ್ತಿ, ಅಭಿರುಚಿ ಸಮಾನ ಲಕ್ಷಣಗಳುಳ್ಳ ತರಗತಿಯ ವ್ಯವಸ್ಥೆಯಿಂದ ಶಿಕ್ಷಣ ಆರ್ಥಿಕವಾಗಿ, ಬೋಧನೆ ದೃಷ್ಟಿಯಿಂದ ಪರಿಣಾಮಕಾರಿಯಾಗುವುದೆಂದು ಸ್ಥೂಲವಾಗಿ ಹೇಳಿದ್ದರೂ ಸೂಕ್ಷ್ಮವಾಗಿ ಪರಿಶೀಲಿಸಿದಾಗ ಆ ವ್ಯವಸ್ಥೆಯಲ್ಲಿ ಅನಾನುಕೂಲಗಳೂ ಕಂಡುಬರುತ್ತವೆ. ಎಷ್ಟೇ ಎಚ್ಚರಿಕೆಯಿಂದ ವರ್ಗೀಕರಿಸಿದ್ದರೂ ಸಮಾಜದಲ್ಲಿರುವಂತೆ ತರಗತಿಯಲ್ಲೂ ಬುದ್ಧಿಶಕ್ತಿ, ಕಲಿಯುವ ವೇಗ, ಉದ್ದೇಶದ ಬಲ, ಆಸಕ್ತಿಯ ತೀವ್ರತೆ ಮುಂತಾದ ಅಂಶಗಳಲ್ಲಿ ಬೇರೆ ಬೇರೆ ಮಟ್ಟದವರಿರುವುದು ಸ್ವಾಭಾವಿಕ. ಆದ್ದರಿಂದ ಬಹು ಬೇಗ ತರಗತಿಯ ಒಬ್ಬೊಬ್ಬ ವಿದ್ಯಾರ್ಥಿಯೂ ಕಲಿವಿನಲ್ಲಿ ಒಂದೊಂದು ಮಟ್ಟವನ್ನು ಮುಟ್ಟಿ ಬಿಡುತ್ತಾನೆ. ಆಗ ಅವರಲ್ಲಿ ಅತಿ ಮುಂದುವರಿದವರೂ ಸಾಧಾರಣರೂ ಮತ್ತು ಹಿಂದುಳಿದವರೂ ಇರುತ್ತಾರೆ. ಅಂಥ ತರಗತಿಯಲ್ಲಿ ಅಧ್ಯಾಪಕರು ತಲೆಗೆಲ್ಲ ಒಂದೇ ಮಂತ್ರ ಎಂಬಂತೆ ಸಾಮೂಹಿಕವಾಗಿ ಬೋಧಿಸಿದಾಗ ಅವರು ಯಾವ ವಿದ್ಯಾರ್ಥಿಯನ್ನುದ್ದೇಶಿಸಿ ಬೋಧಿಸಬೇಕು? ಮುಂದುವರಿದವರನ್ನೇ ಗಮನದಲ್ಲಿರಿಸಿಕೊಂಡು ಬೋಧಿಸಿದರೆ ಮಿಕ್ಕವರು ಅವರಂತೆ ಕಲಿಯಲಾರದೆ ಮುಗ್ಗರಿಸುತ್ತ ತಮ್ಮ ಶಕ್ತಿಯಲ್ಲೆ ನಂಬಿಕೆ ಕಳೆದುಕೊಳ್ಳುತ್ತಾರೆ; ತಾವು ದುರ್ಬಲರು, ಬುದ್ಧಿಹೀನರು, ವ್ಯರ್ಥ ಜೀವಿಗಳು ಎಂದು ಭಾವಿಸಿಕೊಂಡು ಆತ್ಮನಿಕೃಷ್ಟತಾ ಸಂಕೀರ್ಣತೆಗೆ ತುತ್ತಾಗುತ್ತಾರೆ. ಅವರ ವ್ಯಕ್ತಿತ್ವ ವಿಹಿತ ಮಾರ್ಗದಲ್ಲಿ ಬೆಳೆಯಲಾರದೆ ಕಳಂಕಮಯವಾಗುತ್ತದೆ. ದುರ್ಬಲರನ್ನೇ ಗಮನದಲ್ಲಿರಿಸಿಕೊಂಡು ಪಾಠಮಾಡಿದರೆ ಸಾಧಾರಣರೂ ಮುಂದುವರಿದವರೂ ಕಲಿವಿನಲ್ಲಿ ಆಸಕ್ತಿ ಕಳೆದುಕೊಂಡು ನಿರಾಶರಾಗಿತ್ತಾರೆ. ಸಾಧಾರಣದವರನ್ನೇ ಗಮನದಲ್ಲಿರಿಸಿಕೊಂಡು ಪಾಠ ಮಾಡಿದರೂ ಮಿಕ್ಕೆರಡು ವರ್ಗದವರಿಗೂ ಅನಾನುಕೂಲವೆನಿಸುತ್ತದೆ. ಎಂದರೆ ತರಗತಿಯ ವ್ಯವಸ್ಥೆಯಿಂದ ಬೋಧನೆ ವೈಯಕ್ತಿಕವಾಗಿ ಎಲ್ಲರಿಗೂ ಅನಾನುಕೂಲವಾಗಬಹುದು. ಆದ್ದರಿಂದಲೇ ಈ ಶತಮಾನದ ಆದಿಯಲ್ಲಿ ಮಡಾಂ ಮಾಂಟೆಸೋರಿ ಪ್ರತಿ ವಿದ್ಯಾರ್ಥಿಯೂ ಒಂದೊಂದು ತರಗತಿಯೆಂದು ಘೋಷಿಸಿ ತರಗತಿಯ ವ್ಯವಸ್ಥೆಗೆ ತಿಲಾಂಜಲಿ ಬಿಟ್ಟರು.

	ಮಕ್ಕಳ ಶಿಕ್ಷಣದಲ್ಲಿ ವೈಯಕ್ತಿಕ (ವ್ಯಷ್ಟಿಗತ) ವ್ಯತ್ಯಾಸಗಳು ಪ್ರತ್ಯೇಕ ಗಮನದ ಅಗತ್ಯವೂ ಪ್ರಾಮುಖ್ಯಕ್ಕೆ ಬಂದಮೇಲೆ ತರಗತಿಗೆಲ್ಲ ಒಟ್ಟಿಗೆ ಬೋಧಿಸುವ ಬಗ್ಗೆ ವಿರೋಧ ಆರಂಭವಾಗಿ ವೈಯಕ್ತಿಕ ಗಮನಕ್ಕೇ ವಿಶಿಷ್ಟವಾಗಿ ಮೀಸಲಾದ ಹಲವು ನೂತನ ಪದ್ಧತಿಗಳು ಅನುಷ್ಠಾನಕ್ಕೆ ಬಂದುವು, ಮಾಂಟೆಸೋರಿ ಶಿಕ್ಷಣ ಪದ್ಧತಿ ಪ್ರಾಥಮಿಕ ಹಂತದಲ್ಲೂ ಡಾಲ್ಟನ್ ಪದ್ಧತಿ ವಿನೆಟ್ಕ ಪದ್ಧತಿ ಪ್ರೌಢ ಶಾಲಾ ಹಂತದಲ್ಲೂ ಪ್ರಚಾರಕ್ಕೆ ಬಂದುವು. ಆ ಶಾಲೆಗಳಲ್ಲೂ ವಿದ್ಯಾರ್ಥಿ ಸಂಖ್ಯೆ ಅತಿಯಾಗಿದ್ದರೂ ವೈಯಕ್ತಿಕ ಗಮನಕ್ಕೆ ಅವಕಾಶ ಕಲ್ಪಿಸಿಕೊಂಡು ತರಗತಿಯ ಸಾಂಪ್ರದಾಯಿಕ ವರ್ಗೀಕರಣವನ್ನು ಕೈಬಿಟ್ಟಿದ್ದರು.

	ತರಗತಿಯ ವ್ಯವಸ್ಥೆ ಅನಾನುಕೂಲವೆನಿಸಿದ್ದರೂ ಅನಿವಾರ್ಯ. ಸಾರ್ವತ್ರಿಕ ಶಿಕ್ಷಣ ಎಲ್ಲ ದೇಶಗಳಲ್ಲೂ ಅಂಗೀಕೃತ ನೀತಿಯಾಗಿರುವ ಈ ಕಾಲದಲ್ಲಿ ಪ್ರತಿ ಮಗುವನ್ನು ಒಂದೊಂದು ತರಗತಿಯೆಂದು ಭಾವಿಸಿ ಪ್ರತ್ಯೇಕವಾಗಿ ಬೋಧಿಸುವುದು ಅಸಾಧ್ಯ. ಅದಕ್ಕೆ ಎಷ್ಟೊಂದು ಮಂದಿ ಅಧ್ಯಾಪಕರು ಬೇಕು? ಅದಕ್ಕಾಗಿ ಎಷ್ಟೊಂದು ಆಗಾಧ ಪ್ರಮಾಣದಲ್ಲಿ ಹಣ ಬೇಕಾಗುವುದು ? ಅಷ್ಟು ಅಧಿಕ ಪ್ರಮಾಣದಲ್ಲಿ ಜನ ಮತ್ತು ಧನವನ್ನು ಶಿಕ್ಷಣಕ್ಕೆ ತೊಡಗಿಸುವುದು ಯಾವ ರಾಷ್ಟ್ರಕ್ಕೂ ಸಾಧ್ಯವಾಗುವಂತಿಲ್ಲ. ವೈಯಕ್ತಿಕ ಗಮನ ಮತ್ತು ಪ್ರತ್ಯೇಕ ಶಿಕ್ಷಣ ಕಲಿವಿನ ದೃಷ್ಟಿಯಿಂದ ಅಗತ್ಯವಾದರೆ ಸಾರ್ವತ್ರಿಕ ಶಿಕ್ಷಣ ಜನಾಂಗದ ಸಮಗ್ರ ಪುರೋಭಿವೃದ್ಧಿಯ ದೃಷ್ಟಿಯಿಂದ ಅಗತ್ಯವಾಗುತ್ತದೆ. ಆದ್ದರಿಂದ ಇವೆರಡು ದೃಷ್ಟಿಗಳನ್ನೂ ಸಮೀಕರಿಸಿಕೊಂಡು ಮೇಲೆ ಉಲ್ಲೇಖಿಸಿರುವ ಆಧುನಿಕ ಶಿಕ್ಷಣ ಪದ್ಧತಿಗಳು ಅಸ್ತಿತ್ವಕ್ಕೆ ಬಂದವು. ಅವು ಆರಂಭವಾದ ರೂಪದಲ್ಲಿ ಪ್ರಪಂಚದ ಆದ್ಯಂತ ಪ್ರಚಾರಕ್ಕೆ ಬರದಿದ್ದರೂ ಅವು ಎತ್ತಿಹಿಡಿದ ತತ್ತ್ವಗಳು ಪ್ರಚಾರಕ್ಕೆ ಬರುತ್ತಿವೆ. ಎಂದರೆ ತರಗತಿಯ ವ್ಯವಸ್ಥೆಯಲ್ಲೆ ವೈಯಕ್ತಿಕ ಗಮನವನ್ನೂ ಕೊಡುವ ಹೊಸ ಸಂಪ್ರದಾಯ ಬೆಳೆದು ಬರುತ್ತಿದೆ.

	 ತರಗತಿಯ ವ್ಯವಸ್ಥೆ ಅನಿವಾರ್ಯವಾದರೂ ವೈಯಕ್ತಿಕ ಗಮನವೀಯಲು ಸಾಧ್ಯವಾಗುವಂತೆ ತರಗತಿಯನ್ನು ವರ್ಗೀಕರಿಸಬೇಕಾಗುತ್ತದೆ. ಹಾಗೇ ವರ್ಗೀಕರಿಸುವಾಗ ಒಂದೊಂದು ತರಗತಿಯಲ್ಲೂ ಎಷ್ಟು ಮಂದಿ ಇರಬಹುದು? ಒಬ್ಬೊಬ್ಬ ಅಧ್ಯಾಪಕರೂ ಪರಿಣಾಮಕಾರಿಯಾಗಿ ಎಷ್ಟು ಮಂದಿಗೆ ಬೋಧಿಸಬಲ್ಲರು? ತರಗತಿಯ ಈ ಸಂಖ್ಯಾಬಲವನ್ನು ನಿರ್ಧರಿಸುವಾಗ ಪರಿಗಣಿಸಬೇಕಾದ ಅಂಶಗಳಾವುವು? ಆ ಮುಖವಾಗಿ ಸಂಶೋಧನೆಗಳು ನೀಡುವ ಸಲಹೆಗಳಾವುವು? ಈ ಪ್ರಶ್ನೆಗಳು ಸ್ವಾಭಾವಿಕವಾಗಿ ಏಳುತ್ತವೆ. ಶಿಕ್ಷಣ ಶಾಖೆಯವರು ತರಗತಿಯ ಸಂಖ್ಯಾಬಲವನ್ನು ಆಡಳಿದ ದೃಷ್ಟಿಯಿಂದ ನಿಷ್ಕರ್ಷಿಸುವುದುಂಟು. ಪ್ರಾಥಮಿಕ ಶಾಲೆಯಲ್ಲಿ ಪ್ರತಿ ತರಗತಿಯಲ್ಲೂ 30-35 ವಿದ್ಯಾರ್ಥಿಗಳಾದರೆ ಪ್ರೌಢಶಾಲೆಯಲ್ಲಿ 40. ಇದು ಅಂಗೀಕೃತ ಸಂಖ್ಯೆಯಾದರೂ ಶಾಲೆಗೆ ಬರುವವರ ಸಂಖ್ಯೆ ಹೆಚ್ಚುತ್ತಿದ್ದು ಅದೇ ಪ್ರಮಾಣದಲ್ಲಿ ಕಟ್ಟಡದಲ್ಲಿರುವ ಕೊಠಡಿಗಳ ಸಂಖ್ಯೆ ಹೆಚ್ಚುವುದು ಕಷ್ಟವಾದ್ದರಿಂದ ತರಗತಿಯ ವಿದ್ಯಾರ್ಥಿಗಳ ಅಂಗೀಕೃತ ಸಂಖ್ಯೆಯನ್ನು ಸ್ವಾಭಾವಿಕವಾಗಿ ಹೆಚ್ಚಿಸಬೇಕಾಗುತ್ತದೆ. ಅದರಿಂದ ಶಿಕ್ಷಣ ಶಾಖೆಯೂ ಅಂಕೀಕೃತ ಸಂಖ್ಯೆಗಿಂತ ಹೆಚ್ಚಿಗೆ ಸೇರಿಸಿಕೊಳ್ಳಲು ಅನುಮತಿ ನೀಡಬೇಕಾಗುತ್ತದೆ. 

	ಸಾಮಾನ್ಯವಾಗಿ ಕೆಳಗಿನ ಶಾಲೆಗಳಿಗಿಂತ ಮೇಲಿನ ಅಂತಸ್ತಿನ ಶಾಲೆಗಳಲ್ಲಿ ಸಂಖ್ಯಾಬಲ ಹೆಚ್ಚಾಗಿರಬಹುದೆಂದು ಹೇಳುವುದುಂಟು. ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳು ಹೇಳಿದ್ದನ್ನು ಗ್ರಹಿಸಿಕೊಳ್ಳುವಷ್ಟು ಪ್ರಬುದ್ಧರಲ್ಲವಾದ್ದರಿಂದ ಅಲ್ಲಿ 30ಕ್ಕಿಂತ ಹೆಚ್ಚು ಮಂದಿ ಸೇರಿಸಬಾರದೆಂದೂ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳು ಹೇಳಿದ್ದನ್ನು ಗ್ರಹಿಸುವ ಶಕ್ತಿ ಪಡೆದವರಾಗಿರುವುದರಿಂದ ಅಲ್ಲಿ ಸ್ವಲ್ಪ ಹೆಚ್ಚಾಗಿದ್ದರೂ ಸಹ್ಯವೆಂದೂ ಕೆಲವರು ಭಾವಿಸುವರು. ಅದೇ ದೃಷ್ಟಿಯಲ್ಲಿ ಕಾಲೇಜಿನ ತರಗತಿಗಳಲ್ಲಿ ಕೇಳಿ ತಿಳಿದುಕೊಳ್ಳುವುದೇ ಮುಖ್ಯವಾಗಿರುವ ಕೆಲವು ಉಪನ್ಯಾಸದ ತರಗತಿಗಳಲ್ಲಿ 50-60ಕ್ಕೂ ಹೆಚ್ಚಾಗಿ ವಿದ್ಯಾರ್ಥಿಗಳಿರಬಹುದೆಂದೂ ವಾದಿಸುವರು. ವಾಸ್ತವವಾಗಿ ಕೆಲವು ತರಗತಿಗಳಲ್ಲಿ 70-75 ಮಂದಿ ವಿದ್ಯಾರ್ಥಿಗಳಿರುವುದೂ ಕಂಡುಬರುತ್ತದೆ. 

	ಶಿಕ್ಷಕರ ದಕ್ಷತೆ ಮತ್ತು ವ್ಯಕ್ತಿತ್ವವೂ ತರಗತಿಯ ಸಂಖ್ಯಾಬಲವನ್ನು ನಿರ್ಧರಿಸುವ ಅಂಶವಾಗುತ್ತವೆ. ಜಾಣರೂ ಅನುಭವಿಗಳೂ ಬೋಧನ ತಂತ್ರ ಬಲ್ಲವರೂ ತರಗತಿಯ ನಿರ್ವಹಣೆಯಲ್ಲಿ ಚತುರರೂ ಸಂಘಜೀವನದ ಮನೋಭಾವವನ್ನು ಅರಿತವರೂ ಆದ ಅಧ್ಯಾಪಕರು ಹೆಚ್ಚು ಮಂದಿಯಿದ್ದರೂ ತರಗತಿಯನ್ನು ನಿರ್ವಹಿಸಬಲ್ಲರು. ಇತರರಿಗೆ ಇದು ಅಸಾಧ್ಯವಾಗಬಹುದು. ಆದರೆ ಅಂಥ ಅಧ್ಯಾಪಕರಿಗೆ ಪ್ರತ್ಯೇಕ ಸಂಖ್ಯಾಬಲವನ್ನು ನಿರ್ಧರಿಸಲಾಗುವುದಿಲ್ಲ. ಆದರೂ ದೊಡ್ಡ ತರಗತಿಗಳನ್ನು ಏರ್ಪಡಿಸುವುದು ಅನಿವಾರ್ಯವಾದಾಗ ಅವನ್ನು ದಕ್ಷರೂ ಅನುಭವಿಗಳೂ ಆದ ಅಧ್ಯಾಪಕರಿಗೆ ವಹಿಸಬೇಕಾಗುತ್ತದೆ.

	ಬೋಧಿಸುವ ವಿಷಯವೂ ತರಗತಿಯ ಸಂಖ್ಯಾಬಲಕ್ಕೆ ಸಂಬಂಧಿಸಿದ ಅಂಶ, ಕೇವಲ ಉಪನ್ಯಾಸವೇ ಪ್ರಧಾನವಾಗುಳ್ಳ ಭಾಷೆ, ಸಾಹಿತ್ಯ, ಇತಿಹಾಸ ಮುಂತಾದ ವಿಷಯಗಳ ತರಗತಿಗಳಿಗಿಂತ ಪ್ರಯೋಗಗಳನ್ನು ನಡೆಸಬೇಕಾಗಿರುವ ವಿಜ್ಞಾನ, ಭೂಗೋಳ, ಗೃಹವಿಜ್ಞಾನ ಮುಂತಾದ ವಿಷಯಗಳ ತರಗತಿಗಳಲ್ಲಿ ಸಂಖ್ಯಾಬಲ ಕಡಿಮೆಯಿರಬೇಕು.

	ಶಾಲೆಯ ಅಂತಸ್ತು, ಅಧ್ಯಾಪಕರ ದಕ್ಷತೆ, ವಿಷಯದ ಸ್ವರೂಪ-ಇವುಗಳಂತೆ ಕಟ್ಟಡದ ರಚನೆಯೂ ತರಗತಿಯ ಸಂಖ್ಯಾಬಲವನ್ನು ನಿರ್ಧರಿಸತಕ್ಕ ಅಂಶವಾಗಬಹುದು. ಕಟ್ಟಡವನ್ನು ಕಟ್ಟುವಾಗ ಕೊಠಡಿಗಳ ಅಳತೆಯನ್ನು ಒಂದು ನಿರ್ದಿಷ್ಟ ಸಂಖ್ಯೆಯ ವಿದ್ಯಾರ್ಥಿಗಳಿಗೆಂದು ನಿಯೋಜಿಸಲಾಗಿರುತ್ತದೆ. ಆದರೆ ಕಾಲಕ್ರಮೇಣ ಆ ಸಂಖ್ಯೆ ಹೆಚ್ಚುವುದರಿಂದ ತದನುಗುಣವಾಗಿ ಕೊಠಡಿಗಳ ವಿಸ್ತೀರ್ಣ ಹೆಚ್ಚಲಾರದು. ಆಗ ತರಗತಿಯ ಸಂಖ್ಯಾಬಲವನ್ನು ಅಲ್ಲಿನ ಕೊಠಡಿಗಳ ಸಾಮಥ್ರ್ಯಕ್ಕೆ ಅನುಗುಣವಾಗಿ ಮಿತಿಗೊಳಿಸಬೇಕಾಗುತ್ತದೆ.

	ಪರಿಣಾಮಕಾರಿಯಾಗಿ ಬೋಧಿಸಲು ಅವಕಾಶವೀಯಬಲ್ಲ ತರಗತಿಯ ಸಂಖ್ಯಾಬಲದ ಬಗ್ಗೆ ಜಿಜ್ಞಾಸೆ ಪ್ರಾಚೀನ ಕಾಲದಿಂದಲೂ ನಡೆದೇ ಇದೆ. ಇಂದಿಗೂ ಆ ಬಗ್ಗೆ ಒಮ್ಮತದ ತೀರ್ಮಾನಕ್ಕೆ ಬರಲು ಸಾಧ್ಯವಾಗಿಲ್ಲ. ಆರ್ಥಿಕ ಮುಗ್ಗಟ್ಟು, ಅಧ್ಯಾಪಕರ ಕೊರತೆ, ಜನಸಂಖ್ಯೆಯ ಸ್ಫೋಟ-ಈ ಕಾರಣಗಳಿಗಾಗಿ ಈ ಸಮಸ್ಯೆ ಈಗ ಅಧ್ಯಾಪಕರ, ಆಡಳಿತಗಾರರ ಹಾಗೂ ಶಿಕ್ಷಣ ಸೇವಾ ಕಾರ್ಯದಲ್ಲಿ ಪಾತ್ರವಹಿಸುವ ಇತರರ ತೀವ್ರ ಗಮನವನ್ನು ಸೆಳೆದಿರುವುದರ ಜೊತೆಗೆ ಸಂಶೋಧಕರು ಆ ಸಮಸ್ಯೆಯ ಪರಿಹಾರಕ್ಕಾಗಿ ಬೇಕಾದ ಹಾಗೆ ಯತ್ನ ನಡೆಸಿದ್ದಾರೆ. ಪಠ್ಯಕ್ರಮದಲ್ಲಿ ಆಗುವ ಪುನರ್ವವ್ಯಸ್ಥೆ, ಶಿಕ್ಷಣ ವ್ಯವಸ್ಥೆಯಲ್ಲಾಗುವ ಬದಲಾವಣೆ, ಬೋಧನ ತಂತ್ರದಲ್ಲಿ ಅಳವಡಿಸುವ ನೂತನ ವಿಧಾನಗಳು-ಇವೇ ಮುಂತಾದ ಸಂದರ್ಭಗಳಲ್ಲಿ ಈ ಸಮಸ್ಯೆ ಮತ್ತೆ ಮತ್ತೆ ತಲೆದೋರಿ ಈ ಬಗ್ಗೆ ಸಂಶೋಧನೆಗಳು ನಡೆದಿವೆ. ಹೀಗಿದ್ದರೂ ತತ್ತ್ವಚಿಂತಕರಲ್ಲಿ ತರಗತಿಯ ಸಂಖ್ಯಾಬಲಕ್ಕೆ ಒಂದು ಆದರ್ಶ ಮಿತಿಯನ್ನು ನಿರ್ಧರಿಸುವುದು ಸಾಧ್ಯವೇ ? ಒಬ್ಬ ಅಧ್ಯಾಪಕ ಬೋಧಿಸಬಹುದಾದ ತರಗತಿಯ ಸಂಖ್ಯಾಬಲ ಎಷ್ಟು ? ಹಾಗೂ ತೀರ ಸಣ್ಣ ಅಥವಾ ತೀರ ದೊಡ್ಡ ತರಗತಿಗೆ ಪಾಠ ಮಾಡುವುದು ಸಾಧ್ಯವೆ ? ಎಂಬ ಪ್ರಶ್ನೆಗಳೂ ಇತ್ಯರ್ಥವಾಗದೆ ಉಳಿದಿವೆ.

	ತರಗತಿಯ ಸಂಖ್ಯಾಬಲ ಮತ್ತು ವಿದ್ಯಾರ್ಥಿ-ಅಧ್ಯಾಪಕರ ಪ್ರಮಾಣ ಇವೆರಡನ್ನೂ ಒಂದಕ್ಕೊಂದಕ್ಕೆ ಸಂವಾದಿಯಾಗಿ ಬಳಸುತ್ತಿದ್ದರೂ ಅವಕ್ಕೆ ಪ್ರತ್ಯೇಕ ಅರ್ಥವ್ಯಾಪ್ತಿಯುಂಟು. ತರಗತಿಯ ಸಂಖ್ಯಾಬಲ ಒಬ್ಬ ಅಧ್ಯಾಪಕ ನಿರ್ವಹಿಸಬೇಕಾದ ಕಾರ್ಯದ ಹೊರೆಯನ್ನು ಸೂಚಿಸುವುದಾದರೆ ವಿದ್ಯಾರ್ಥಿ-ಅಧ್ಯಾಪಕರ ಪ್ರಮಾಣ ಒಂದು ಶಾಲೆಯಲ್ಲಿನ ಒಟ್ಟು ವಿದ್ಯಾರ್ಥಿ ಸಂಖ್ಯೆಯನ್ನು ಅಲ್ಲಿನ ಅಧ್ಯಾಪಕರ ಒಟ್ಟು ಸಂಖ್ಯೆಯಿಂದ ಭಾಗಿಸಿದಾಗ ಬರುವ ಒಂದು ಸಂಖ್ಯಾ ಪ್ರಮಾಣವನ್ನು ಸೂಚಿಸುತ್ತದೆ. ಅನೇಕ ವೇಳೆ ಭಾಗಶಃ ಕಾಲದ ಅಧ್ಯಾಪಕರೂ ಮೇಲ್ವಿಚಾರಣೆಯ ಅಧ್ಯಾಪಕರೂ ಅದರಲ್ಲಿ ಸೇರಿರುವುದರಿಂದ ತರಗತಿಯ ಸಂಖ್ಯಾಬಲದ ಬಗ್ಗೆ ಅದು ನಿಕರವಾದ ಸೂಚನೆಯಾಗಲಾರದು. ಒಟ್ಟು 300 ಮಂದಿಯಿರುವ ಒಂದು ಶಾಲೆಯಲ್ಲಿ ಒಟ್ಟು 30 ಮಂದಿ ಅಧ್ಯಾಪಕರಿದ್ದರೆ ವಿದ್ಯಾರ್ಥಿ-ಅಧ್ಯಾಪಕರ ಪ್ರಮಾಣ 300:30. ಅಥವಾ ಒಬ್ಬ ಅಧ್ಯಾಪಕರಿಗೆ 30 ವಿದ್ಯಾರ್ಥಿಗಳೆಂದು ಸ್ಥೂಲವಾಗಿ ಅರ್ಥವಾದರೂ ಅಲ್ಲಿನ ತರಗತಿಯಲ್ಲಿ 60-70 ಮಂದಿ ವಿದ್ಯಾರ್ಥಿಗಳಿರಬಹುದು. ಇದು ಶಿಕ್ಷಣದ ವ್ಯವಸ್ಥಾಪಕರಿಗೂ ಆಡಳಿತಗಾರರಿಗೂ ಅನುಕೂಲವೆನಿಸಬಹುದಾದ ಒಂದು ಸೂಚನೆಯಾಗಬಹುದಾದರು ತರಗತಿಯ ಬೋಧನೆಗೆ ಉಚಿತವೆನಿಸಬಲ್ಲ ಸಂಖ್ಯಾಬಲವೆನಿಸಲಾರದು. ಆದರೂ ಆಡಳಿತಗಾರರು ತರಗತಿಯ ಸಂಖ್ಯೆಯನ್ನು ನಿಗದಿ ಮಾಡುವಾಗ ಈ ಪ್ರಮಾಣವನ್ನು ಅನುಸರಿಸುವುದುಂಟು. ಆಡಳಿತಗಾರರು ಪ್ರಾಥಮಿಕ ತರಗತಿಯ ವಿದ್ಯಾರ್ಥಿ ಸಂಖ್ಯೆ ಸುಮಾರು 30-35 ಇರಬೇಕೆಂದೂ ಪ್ರೌಢಶಾಲೆಯ ತರಗತಿಗಳಲ್ಲಿ 40 ಇರಬೇಕೆಂದೂ ತೀರ್ಮಾನಿಸವುದುಂಟು. ಕಾಲೇಜುಗಳಲ್ಲಾದರೆ ಈ ರೀತಿ ನಿಗದಿ ಮಾಡುವುದರ ಬದಲು ವಿದ್ಯಾರ್ಥಿ ಅಧ್ಯಾಪಕರ ಪ್ರಮಾಣವನ್ನು ಮಾತ್ರ ನಿಗದಿ ಮಾಡುವುದು ವಾಡಿಕೆ.

	ತರಗತಿಯ ಸಂಖ್ಯಾಬಲವನ್ನು ವಾಸ್ತವಿಕವಾಗಿ ನಿರ್ಧರಿಸತಕ್ಕ ಕೆಲವು ಅಂಶಗಳಲ್ಲಿ ಅಧ್ಯಾಪಕರ ಸರಬರಾಜಿನ ಕೊರತೆ, ಶಾಲೆಯ ಅಥವಾ ಶಿಕ್ಷಣ ಶಾಖೆಯ ಆದಾಯದ ಕುಸಿತ ಮತ್ತು ವಿದ್ಯಾರ್ಥಿ ಸೇರ್ಪಡೆಯಲ್ಲಾಗುವ ತೀವ್ರ ರೀತಿಯ ಹೆಚ್ಚಳ ಮುಖ್ಯವಾದುವು. ಜೊತೆಗೆ ಕೆಲವು ಪ್ರದೇಶಗಳಲ್ಲಿ ತಕ್ಕಷ್ಟು ಶಾಲೆಗಳಲ್ಲದಾಗಲೂ ಇದ್ದ ಶಾಲೆಗಳನ್ನು ಕಾರಾಣಾಂತರಗಳಿಂದ ವಜಾ ಮಾಡಿದಾಗಲೂ ಇದೇ ಪರಿಸ್ಥಿತಿಯುಂಟಾಗುತ್ತದೆ. ಸಂಶೋಧನೆಗಳು ಇಲ್ಲವೇ ಶಿಕ್ಷಣ ಶಾಖೆ ಸೂಚಿಸುವ ಸಂಖ್ಯಾಬಲವನ್ನು ಮೀರಿ ತರಗತಿಯ ಗಾತ್ರವನ್ನು ಹೆಚ್ಚಿಸುವ ಈ ಕಾರಕಗಳ ಮೇಲೆ ಅಧ್ಯಾಪಕರ ಯಾವ ನಿಯಂತ್ರಣವೂ ಇರುವುದಿಲ್ಲ.

	ತರಗತಿಯ ಸಂಖ್ಯಾಬಲವೂ ವಿದ್ಯಾರ್ಥಿ ಅಧ್ಯಾಪಕರ ಪ್ರಮಾಣವೂ ಪ್ರಾದೇಶಿಕವಾಗಿ ವ್ಯತ್ಯಾಸವಾಗುತ್ತವೆ. ಜನಸಂಖ್ಯೆಯಲ್ಲಿ ಅಧಿಕ ಸಾಂದ್ರತೆಯುಳ್ಳ ನಗರ ಮತ್ತು ಉಪನಗರಗಳ ಪ್ರದೇಶಗಳಲ್ಲೂ ಔದ್ಯೋಗಿಕ ವಲಯಗಳಲ್ಲೂ ಶಾಲೆಗಳಲ್ಲಿ ಜನಸಂಖ್ಯೆಯ ಸಾಂದ್ರತೆ ವಿರಳವಾಗಿರುವ ಗ್ರಾಮಾಂತರ ಪ್ರದೇಶಗಳಿಗಿಂತ ಹೆಚ್ಚಾಗಿರುತ್ತದೆ. ಬೇರೆ ಬೇರೆ ವಿಷಯಗಳ ತರಗತಿಗಳಲ್ಲೂ ಈ ವ್ಯತ್ಯಾಸ ಕಂಡುಬರುತ್ತದೆ. ವಿಜ್ಞಾನ, ವೃತ್ತಿಶಿಕ್ಷಣ, ಕಲಾಶಿಕ್ಷಣ, ಗೃಹವಿಜ್ಞಾನ ಮುಂತಾದ ತರಗತಿಗಳಿಗಿಂತ ಭಾಷೆ, ಸಮಾಜ ಪಾಠ ಮುಂತಾದ ತರಗತಿಗಳಲ್ಲಿ ವಿದ್ಯಾರ್ಥಿ ಸಂಖ್ಯಾಬಲ ಹೆಚ್ಚಾಗಿರುತ್ತದೆ. ಹಾಗೆಯೆ ಪ್ರಾಥಮಿಕ ಶಾಲೆಗಳಿಗಿಂತ ಪ್ರೌಢಶಾಲೆಯ ತರಗತಿಯ ವಿದ್ಯಾರ್ಥಿ ಸಂಖ್ಯೆ ಹೆಚ್ಚಾಗಿರುತ್ತದೆ.

	ಎಲ್ಲ ದೇಶಗಳಲ್ಲೂ ಶಿಕ್ಷಣ ಶಾಖೆ ಅಥವಾ ಶಾಲಾಮಂಡಲಿ ತರಗತಿಯ ಸಂಖ್ಯಾ ಬಲವನ್ನು ನಿರ್ಧರಿಸುವುದುಂಟು. ಖಾಸಗಿ ಶಾಲೆಗಳಿಗೆ ಸಹಾಯಧನ ನೀಡುವಾಗ ಅದನ್ನು ಆಧಾರ ಮಾಡಿಕೊಳ್ಳವುದುಂಟು. ಆದರೂ ಅನೇಕ ಖಾಸಗಿ ಶಾಲೆಗಳಲ್ಲಿ ನಿಷ್ಕರ್ಷಿತ ಸಂಖ್ಯೆಗಿಂತ ಕಡಿಮೆ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳುವ ಸಂಪ್ರದಾಯ ಕಂಡುಬರುವುದುಂಟು. ಅಂಥ ಶಾಲೆಗಳಲ್ಲಿ ಹೆಚ್ಚು ಪರಿಣಾಮಕಾರಿ ಶಿಕ್ಷಣ ದೊರಕುವುದೆಂದು ವಿದ್ಯಾರ್ಥಿಗಳೂ ಪೋಷಕರೂ ಭಾವಿಸುವುದುಂಟು. ಮತ್ತೆ ಕೆಲವು ಖಾಸಗಿ ಮತ್ತು ಸರ್ಕಾರಿ ಶಾಲೆಗಳಲ್ಲಿ ನಿಷ್ಕರ್ಷಿತ ಸಂಖ್ಯೆಗಿಂತ ತೀರ ಹೆಚ್ಚು ಮಂದಿಯನ್ನು ಸೇರಿಸಿಕೊಳ್ಳಬೇಕಾಗಬಹುದು. ಅಂಥ ಶಾಲೆಗಳಲ್ಲಿ ಶಿಕ್ಷಣ ಪರಿಣಾಮಕಾರಿಯಾಗುವುದಿಲ್ಲವೆಂದು ಹೇಳುವುದುಂಟು. ಈ ಎರಡು ರೀತಿಯ ಅಭಿಪ್ರಾಯಗಳೂ ಸಾಮಾನ್ಯ ಅಭಿಪ್ರಾಯಗಳೇ ಹೊರತು ಸಂಶೋಧನೆಗಳ ಬೆಂಬಲ ಪಡೆದವಲ್ಲ. ಸಂಶೋಧನೆಗಳು ಇನ್ನೂ ನಿರ್ದಿಷ್ಟ ತೀರ್ಮಾನಗಳನ್ನು ರೂಢಿಸದಿರುವಾಗ ಇಂಥ ಅಭಿಪ್ರಾಯಗಳೂ ಜನಸಾಮಾನ್ಯರಲ್ಲೂ ಶಿಕ್ಷಣ ಸಾಹಿತ್ಯದಲ್ಲೂ ಪ್ರಚಾರಕ್ಕೆ ಬರುವುದು ಸ್ವಾಭಾವಿಕ.

	ತರಗತಿಯ ಸಂಖ್ಯಾಬಲ ಬಗ್ಗೆ ಸಂಶೋಧನೆಗಳು ತಕ್ಕಷ್ಟು ನಡೆದಿದ್ದರೂ ಅವು ಸಂಬಂಧಿಸಿದ ಎಲ್ಲ ಮುಖಗಳನ್ನೂ ಪರಿಗಣಿಸಿಲ್ಲ. ಬೋಧನೆಯ ಪರಿಣಾಮವನ್ನು ನಿರ್ಧರಿಸುವಾಗ ತರಗತಿಯ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಪಡೆಯುವ ಅಂಕಗಳನ್ನು ಮಾತ್ರ ಆಧಾರ ಮಾಡಿಕೊಂಡಿರುವರು. ಆದರೆ ಬೋಧನೆಯಿಂದ ಆಗಬೇಕಾದ ಇತರ ಪರಿಣಾಮಗಳನ್ನು ಪರಿಗಣಿಸಲಿಲ್ಲ. ಇನ್ನು ಸಂಖ್ಯಾಬಲದಂತೆ ಬೋಧನೆಯನ್ನು ಪರಿಣಾಮಗೊಳಿಸುವ ಇತರ ಅಂಶಗಳ ಬಗ್ಗೆಯೂ ಗಮನಹರಿಸಿಲ್ಲ. ಇವೆಲ್ಲ ಕಾರಣಗಳಿಂದ ಅವು ನೀಡುವ ಸಲಹೆಗಳು ಅಷ್ಟು ನಂಬಲರ್ಹವೆನಿಸುವುದಿಲ್ಲ. ಈಚೆಗೆ ನಡೆದಿರುವ ಸಂಶೋಧನೆಗಳು ಬಹುಮಟ್ಟಿಗೆ ತರಗತಿಯ ಸಂಖ್ಯೆ ಅತಿ ಹೆಚ್ಚಾಗಿದ್ದರೂ ಅತಿ ಕಡಿಮೆಯಾಗಿದ್ದರೂ ಬೋಧನೆಯ ಪರಿಣಾಮದ ಮೇಲೆ ಅಂಥ ಪ್ರಭಾವ ಬೀರುವುದಿಲ್ಲವೆಂದೂ ಆದರೆ ವಿದ್ಯಾರ್ಥಿಗಳ ಕಾಲತತ್ಪರತೆ, ಸಾಮಾಜಿಕ ಗುಣ, ಗಮನ, ಶಿಸ್ತು ಕಾರ್ಯನಿರ್ವಹಿಸುವಾಗ ಅನುಸರಿಸುವ ಒಳ್ಳೆಯ ಅಭ್ಯಾಸ-ಇವುಗಳ ಬೆಳೆವಣಿಗೆಯೊಡನೆ ಅದು ನೇರವಾಗಿ ಸಂಬಂಧಿಸಿರುವುದಾಗಿ ಸೂಚಿಸಿವೆ. ಆದರೆ ಕೆಲವು ಸಂಶೋಧನೆಗಳು ಪಠ್ಯ ವಿಷಯಗಳ ಶಿಕ್ಷಣಾಭಿವೃದ್ಧಿಗೆ ಸಣ್ಣ ತರಗತಿಗಳೇ ಉತ್ತಮವೆಂದು ತೋರಿಸಿವೆ. ಶಿಶುವಿಹಾರ ಮಟ್ಟದಲ್ಲಿ ದೊಡ್ಡ ತರಗತಿಗಳು ಮಕ್ಕಳ ಬಹುಮುಖವಾದ ಬೆಳೆವಣಿಗೆಗೆ ಸಹಕಾರಿಯೆಂಬುದನ್ನೂ ಸೂಚಿಸಿವೆ. ರೇಡಿಯೋ ಮತ್ತು ಟೆಲಿವಿಷನ್ ತರಗತಿಗಳಲ್ಲಿ ನಿದರ್ಶನ ಪಾಠಗಳಾದರೆ ಸಂಖ್ಯಾಬಲ ಹೆಚ್ಚಾಗಿರಬಹುದೆಂದೂ ವಿದ್ಯಾರ್ಥಿ ಕ್ರಿಯಾತ್ಮಕ ಪಾತ್ರವಹಿಸಬೇಕಾದ ಪಾಠವಾದರೆ ಕಡಿಮೆಯಿರುವುದು ಉತ್ತಮವೆಂದೂ ಸೂಚಿಸಿವೆ. ಕಾಲೇಜಿನ ಮಟ್ಟದಲ್ಲಿ ಚರ್ಚೆ, ವಿಮರ್ಶೆ, ಮುಂತಾದವಕ್ಕೆ ಅವಕಾಶವಿಲ್ಲದ ಪಾಠಗಳಾದರೆ ತರಗತಿಯ ಸಂಖ್ಯಾಬಲ ವಿದ್ಯಾರ್ಥಿಯ ವಿಷಯ ಜ್ಞಾನದ ಕಲಿವಿನ ಮೇಲೆ ಪರಿಣಾಮ ಬೀರುವುದಿಲ್ಲವೆಂದು ಸೂಚಿಸಿವೆ.

	ಸಣ್ಣ ತರಗತಿಗಳಲ್ಲಿ ಅಧ್ಯಾಪಕರು ವಿದ್ಯಾರ್ಥಿಗಳನ್ನು ಅರಿತುಕೊಳ್ಳುವುದಕ್ಕೂ ವೈಯಕ್ತಿಕ ಗಮನವಿತ್ತು ಅವರ ವಿಶಿಷ್ಟ ದೌರ್ಬಲ್ಯಗಳನ್ನು ಗುರುತಿಸಿ ನಿವಾರಕ ಶಿಕ್ಷಣವೀಯುವುದಕ್ಕೂ ನೂತನ ಬೋಧನ ತಂತ್ರಗಳನ್ನು ಪ್ರಯೋಗಿಸುವುದಕ್ಕೂ ತರಗತಿಯ ಶಿಸ್ತಿನ ಮಟ್ಟವನ್ನು ಕಾಪಾಡಿಕೊಳ್ಳುವುದಕ್ಕೂ ಅನುಕೂಲವೆಂದು ಸೂಚಿಸಿವೆ. ಇನ್ನೊಂದು ತಂಡದ ಸಂಶೋಧನೆಗಳು, ಸಣ್ಣ ತರಗತಿಗಳಾದರೆ ಅಧ್ಯಾಪಕರ ಕಠೋರ ಶಿಸ್ತನ್ನು ಅನುಷ್ಠಾನಕ್ಕೆ ತಂದು ಸರ್ವಾಧಿಕಾರಿಗಳಂತೆ ಒರಟೊರಟಾಗಿ ವರ್ತಿಸುವರೆಂದೂ ಸೂಚಿಸಿವೆ.

	ಇಷ್ಟಾದರೂ ತರಗತಿಯ ಸಂಖ್ಯಾಬಲ ಇಷ್ಟೇ ಇರುವುದು ಉಚಿತವೆಂದು ಸಂಶೋಧನೆಗಳು ಸೂಚಿಸಿಲ್ಲ. ಶಿಕ್ಷಣದ ಎಲ್ಲ ಸತ್ಪಲಗಳನ್ನೂ ಬೋಧನೆಯ ಮೇಲೆ ಪರಿಣಾಮ ಬೀರತಕ್ಕ ಇತರ ಅಂಶಗಳನ್ನೂ ಗಣನೆಗೆ ತೆಗೆದುಕೊಂಡು ನೂತನ ಸಂಶೋಧನೆಗಳು ಇನ್ನು ಮೇಲೆ ನಡೆಯಬೇಕಾಗಿದೆ. ತರಗತಿಯ ಸಂಖ್ಯಾಬಲ ಶಿಕ್ಷಣದ ಉದ್ದೇಶ, ಬೋಧನಕ್ರಮ, ಪಠ್ಯವಿಷಯ, ಶಾಲಾವ್ಯವಸ್ಥೆ-ಈ ಕ್ಷೇತ್ರಗಳಿಗೆ ನೇರವಾಗಿ ಸಂಬಂಧಿಸಿರುವುದರಿಂದ ಆ ಕ್ಷೇತ್ರಗಳಲ್ಲಿ ಸಂಶೋಧನೆಗಳು ಅಗತ್ಯವಾಗಿ ನಡೆಯಬೇಕಾಗಿದೆ.

	ಸಂಗೀತ, ಅಂಗಸಾಧನೆ -ಇವುಗಳ ತರಗತಿಗಳು ಇಂಗ್ಲಿಷ್, ಇತಿಹಾಸ, ಸಾಹಿತ್ಯ ಮುಂತಾದ ತರಗತಿಗಳಿಗಿಂತ ದೊಡ್ಡದಾಗಿರುವುದೂ ಗೃಹವಿಜ್ಞಾನ, ಪ್ರಯೋಗಪಾಠ, ವ್ಯವಸಾಯ, ಔದ್ಯೋಗಿಕ ಕಲೆ ಮುಂತಾದ ವಿಷಯದ ತರಗತಿಗಳು ಚಿಕ್ಕದಾಗಿರುವುದೂ ರೂಢಿಯಲ್ಲಿದೆ. ಅಂಗವಿಕಲರ, ಬುದ್ಧಿಮಂದರ ಹಾಗೂ ಇತರ ನ್ಯೂನ ಮಕ್ಕಳ ತರಗತಿ ಸಾಮಾನ್ಯದ ತರಗತಿಯಲ್ಲಿ ಅರ್ಧದಷ್ಟಿರುತ್ತದೆ. ನ್ಯೂನ ಮಕ್ಕಳ ಸಂಖ್ಯೆ ಪ್ರತಿ ತರಗತಿಯಲ್ಲೂ 15ಕ್ಕೆ ಕಡಿಮೆಯಿರಬೇಕೆಂದೂ ಕೆಲವು ಕಡೆ ನಿಯಮವುಂಟು. ಕಿಂಡರ್ ಗಾರ್ಟನ್ ತರಗತಿಗಳಲ್ಲಿ 28-30ರವರೆಗೂ ಮೇಲ್ಮಟ್ಟದ ತರಗತಿಗಳಲ್ಲಿ ಆ ಸಂಖ್ಯಾಬಲ ಹೆಚ್ಚಿರಬಹುದೆಂದೂ ಹೇಳುವುದುಂಟು. 

	ಶಿಕ್ಷಣದಲ್ಲಿ ಬಳಕೆಗೆ ಬಂದಿರುವ ತಂತ್ರಜ್ಞಾನದ ಫಲವಾಗಿ ಎಂದರೆ ಸ್ವಯಂ ಬೋಧನೆ ಯಂತ್ರ, ರೇಡಿಯೋ, ಟೆಲಿವಿಷನ್ ಮತ್ತು ಇತರ ನಿಯೋಜಿತ ಬೋಧನ ತಂತ್ರಗಳ ಸಾಂಪ್ರದಾಯಿಕ ತರಗತಿಯ ಸಂಖ್ಯಾಬಲದಲ್ಲಿ ಹೆಚ್ಚು ಕಡಿಮೆಯಾಗುತ್ತಿದೆ. ಇಡೀ ದೇಶವೇ ಉಪಗ್ರಹ ಶಿಕ್ಷಣದಿಂದ ಒಂದು ತರಗತಿಯಾಗುತ್ತಿದೆ. (ನೋಡಿ- ಖಂಡವ್ಯಾಪ್ತಿ-ತರಗತಿ) ಔದ್ಯೋಗಿಕ ತಂತ್ರ ಶಿಕ್ಷಣ ಸೇವೆಗೆ ಒಳವಟ್ಟಂತೆ ತರಗತಿಯ ಸಂಖ್ಯೆ ಅತಿಯಾಗಿ ಹೋಗಿ ಸಾಮೂಹಿಕ ಶಿಕ್ಷಣ ಹೆಚ್ಚುವ ಪ್ರವೃತ್ತಿ ಕಂಡುಬರುತ್ತಿದೆ. ಸಾಮೂಹಿಕ ಬೋಧನೆ, ತಂಡದ ಶಿಕ್ಷಣ, ಸ್ವತಂತ್ರ ಅಧ್ಯಯನ ಮುಂದಿನ ಶಿಕ್ಷಣರಂಗದ ಲಕ್ಷಣಗಳಾಗಬಹುದು.

	ಕೊಠಾರಿ ಶಿಕ್ಷಣ ಆಯೋಗ ಪ್ರಾಥಮಿಕ ಪೂರ್ವದ ಶಾಲೆಯಲ್ಲಿ ತರಗತಿಯ ಗಾತ್ರದ ಬಗ್ಗೆ ಪರಿಶೀಲನೆ ನಡೆಸಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ತರಗತಿಯ ಗಾತ್ರ 50, ಹಿರಿಯ ಪ್ರಾಥಮಿಕ ಶಾಲೆಯಲ್ಲಿ 45, ಪ್ರೌಢಶಾಲೆಯಲ್ಲಿ 45 ಇರಬೇಕೆಂದು ಸೂಚಿಸಿದೆ. ಇದು ಆಯೋಗ ಸೂಚಿಸಿರುವ ಪರಮಾವಧಿ ಸಂಖ್ಯೆ: ಅದಕ್ಕಿಂತ ಕಡಿಮೆಯಿರುವುದು ಬೋಧನೆಗೆ ಅಗತ್ಯವೆಂಬುದನ್ನು ಒಪ್ಪಿದ್ದರೂ ಹಣದ ಅಭಾವ, ವಿದ್ಯಾರ್ಥಿ ಪ್ರವೇಶದ ಒತ್ತಡ, ಜನಸಂಖ್ಯೆಯಲ್ಲಾಗುತ್ತಿರುವ ತೀವ್ರವೇಗದ ಹೆಚ್ಚಳ- ಇವುಗಳಿಗಿರುವ ನಮ್ಮ ದೇಶದಲ್ಲಿ ಆ ಸಲಹೆ ಅನಿವಾರ್ಯವೇ ಆಗುತ್ತದೆ. ಪಾಠ ಕೇವಲ ಭಾಷಣ, ಉಪನ್ಯಾಸಗಳ ಸ್ವರೂಪವನ್ನು ತಾಳುವ ಕಾಲೇಜಿನ ಮಟ್ಟದಲ್ಲಿ ಸಂಖ್ಯಾಬಲ ಇನ್ನೂ ಹೆಚ್ಚಾದರೂ ಅದು ಅಷ್ಟು ತೀವ್ರ ರೀತಿಯ ಸಮಸ್ಯೆಯೆನಿಸಲಾರದು. ಕೊಠಾರಿ ಆಯೋಗ ಕೆಳದರ್ಜೆಯ ಶಾಲೆಯಲ್ಲಿ ತರಗತಿಯ ಸಂಖ್ಯಾಬಲ ಮೇಲ್ದರ್ಜೆಯವಕ್ಕಿಂತ ಹೆಚ್ಚಾಗಿರಬಹುದೆಂದು ಸೂಚಿಸಿದೆ. ಆದರೆ ಇದನ್ನು ಅನೇಕರು ಒಪ್ಪುವುದಿಲ್ಲ.

	ವರ್ಗೀಕರಣ ಪದ್ಧತಿಗಳು : ತರಗತಿಯ ಸಂಖ್ಯಾಬಲದ ಬಗ್ಗೆಯಾಗಲಿ ಒಬ್ಬ ಅಧ್ಯಾಪಕ ನಿರ್ವಹಿಸಬಹುದಾದ ತರಗತಿಯ ಗಾತ್ರದ ಬಗ್ಗೆಯಾಗಲಿ ಸಂಶೋಧನೆಗಳು ನಿಖರವಾದ ಸಂಖ್ಯಾಬಲವನ್ನು ಸೂಚಿಸದಿದ್ದರೂ ಅವು ತರಗತಿಯ ವರ್ಗೀಕರಣದ ಬಗ್ಗೆ ನೀಡಿರುವ ಅಭಿಪ್ರಾಯಗಳನ್ನು ಆಧಾರ ಮಾಡಿಕೊಂಡು ಬೇರೆ ಬೇರೆ ವಿಧವಾದ ವರ್ಗೀಕರಣದ ಪದ್ಧತಿಗಳು ಆಚರಣೆಗೆ ಬರುತ್ತಿವೆ. ಅವುಗಳಲ್ಲಿ ಮುಖ್ಯವಾದವನ್ನು ಮುಂದೆ ಸೂಚಿಸಿದೆ.

1. ವಯಸ್ಸನ್ನು ಆಧರಿಸಿದ ವರ್ಗೀಕರಣ : ವಯಸ್ಸಿನ ಆಧಾರದ ಮೇಲೆ ವಿದ್ಯಾರ್ಥಿಗಳನ್ನು ವರ್ಗೀಕರಿಸುವುದು ಹಿಂದಿನಿಂದ ಬಂದಿರುವ ಸಂಪ್ರದಾಯ. ಪಠ್ಯವಸ್ತುವನ್ನು ವಯಸ್ಸಿನ ಆಧಾರದ ಮೇಲೆ ಬೇರೆ ಬೇರೆ ತರಗತಿಗಳಲ್ಲಿ ಅಳವಡಿಸಿದೆ. ಕಡ್ಡಾಯ ಶಿಕ್ಷಣ ಆಚರಣೆಗೆ ಬಂದ ಮೇಲೆ ಶಾಲೆಗೆ ಸೇರುವ ವಯಸ್ಸಿನ ಸಮಾನತೆ ಇರುವಂತೆ ಪ್ರತಿವರ್ಷವೂ ಮುಂದಿನ ತರಗತಿಗೆ ಹೋಗುವಂತಿದ್ದರೆ ತರಗತಿಯ ಎಲ್ಲ ಮಕ್ಕಳೂ ಸಮಾನ ವಯಸ್ಕರಾಗಿರುತ್ತಾರೆ. ಅವರೆಲ್ಲ ಸಮಾನ ಶಿಕ್ಷಣಾಭಿವೃಧ್ದಿ ಪಡೆದಿರುವುದರಿಂದ ತರಗತಿಯ ಬೋಧನೆಗೆ ಅನುಕೂಲವಾಗುತ್ತದೆ. ಆದರೆ ತೇರ್ಗಡೆಯಾಗದ ವಿದ್ಯಾರ್ಥಿಗಳನ್ನು ಸಮವಯಸ್ಸಿನವರೊಡನೆ ಸೇರಿಸುವಂತಿಲ್ಲ. ಗ್ರಾಮಾಂತರ ಪ್ರದೇಶದಲ್ಲಿ ನಿಲುಗಡೆ ಅತಿಯಾಗಿದ್ದು ಅಲ್ಲಿಗೆ ಈ ಆಧಾರ ಅನುಕೂಲವೆನಿಸಲಾರದು. ಮೇಲಾಗಿ ತರಗತಿಯ ಮಕ್ಕಳು ಬುದ್ಧಿ ಶಕ್ತಿಯಲ್ಲಿ ಭಿನ್ನವಾಗಿರುವುದರಿಂದ ಒಮ್ಮೆ ಸೇರಿದ ವಿದ್ಯಾರ್ಥಿಗಳು ಬಹುಬೇಗ ಶಿಕ್ಷಣಾಭಿವೃದ್ಧಿಯಲ್ಲೂ ಭಿನ್ನಮಟ್ಟದವರಾಗಿಬಿಡುತ್ತಾರೆ. ಇದರಿಂದಲೂ ಬೋಧನೆಗೆ ಅನಾನುಕೂಲವಾಗುವುದು. ಆದ್ದರಿಂದ ವಯಸ್ಸೊಂದನ್ನೇ ಆಧಾರಮಾಡಿಕೊಳ್ಳುವುದು ಉಚಿತವೆನಿಸದೆಂಬ ವಾದ ಆರಂಭವಾಗಿದೆ.

	2 ಬುದ್ಧಿಶಕ್ತಿ ಆಧಾರಿತ ವರ್ಗೀಕರಣ : ಬುದ್ಧಿಶಕ್ತಿ ಎಂದರೆ ಸ್ಥೂಲವಾಗಿ ಕಲಿಯುವ ಶಕ್ತಿ ಎಂದು ಭಾವಿಸಬಹುದು. ಈಗ ಅದನ್ನು ಅಳೆಯಲು ಎಲ್ಲ ವಯಸ್ಸಿನ ಮಕ್ಕಳಿಗೂ ಪರೀಕ್ಷಣಗಳು ಸಿದ್ಧವಾಗಿವೆ. ಅವುಗಳ ಸಹಾಯದಿಂದ ಮಕ್ಕಳು ಬುದ್ಧಿಶಕ್ತಿಯನ್ನು ಅಳೆಯಬಹುದು, ವಯಸ್ಸು ಎಷ್ಟೇ ಆಗಿರಲಿ ಸಮಾನ ಮಟ್ಟದ ಬುದ್ಧಿಶಕ್ತಿಯುಳ್ಳವರನ್ನೆಲ್ಲ ಒಂದು ವರ್ಗವಾಗಿ ವರ್ಗೀಕರಿಸುವ ನೂತನ ಸಂಪ್ರದಾಯ ಆರಂಭವಾಗಿದೆ. ಆಕಸ್ಮಿಕವಾಗಿ ಒಬ್ಬ ಬಾಲಕ ಶಿಕ್ಷಣಾಭಿವೃದ್ಧಿಯಲ್ಲಿ ಇತರರಷ್ಟು ಸಾಧಿಸಿರದಿದ್ದರೂ ಬುದ್ಧಿಶಕ್ತಿಯಲ್ಲಿ ಹೆಚ್ಚಾಗಿದ್ದರೆ ಅವನನ್ನು ಅವರೊಡನೆ ಸೇರಿಸಬಹುದು. ಅವನು ಇತರರಿಗಿಂತ ಬೇಗ ಕಲಿತು ಅವರೊಡನೆ ಸರಿದೂಗುವಂತಾಗುತ್ತಾನೆ. ಈ ಆಧಾರ ಮುಖ್ಯವಾಗಿ ಪ್ರಾಥಮಿಕ ಶಾಲೆಯಲ್ಲಿ ವರ್ಗೀಕರಣಕ್ಕೆ ಅನ್ವಯಿಸುತ್ತದೆ; ವಿಷಯಜ್ಞಾನವೇ ಪ್ರಮುಖ ಕಲಿಯುವ ಅಂಶವಾಗಿರುವ ಪ್ರೌಢಶಾಲೆಗಳಿಗೆ ಅಷ್ಟಾಗಿ ಅನ್ವಯಿಸಲಾರದು. ವಿಷಯ ಜ್ಞಾನವೇ ಇಲ್ಲದೆ ಅಲ್ಲಿ ಮುಂದುವರಿಯುವುದು ಕಷ್ಟ. 

3. ಶಿಕ್ಷಣಾಭಿವೃಧಿ ಆಧಾರಿತ ವರ್ಗೀಕರಣ : ಇದು ವರ್ಗೀಕರಣಕ್ಕೆ ಪ್ರಚಾರದಲ್ಲಿರುವ ಬಹುಮುಖ್ಯ ಆಧಾರ. ಬೋಧಿಸುವ ಎಲ್ಲ ವಿಷಯಗಳಲ್ಲಿ ಎಲ್ಲರೂ ಸಮಾನಮಟ್ಟವನ್ನು (ಶಿಕ್ಷಣಾಭಿವೃಧಿಯನ್ನು) ಸಾಧಿಸಿರುವುದು ಅಪರೂಪ. ಆದ್ದರಿಂದ ಭಾಷೆ, ಗಣಿತ, ವಿಜ್ಞಾನ-ಈ ಮೂರು ವಿಷಯಗಳನ್ನು ಮಾತ್ರ ಗಣನೆಗೆ ತೆಗೆದುಕೊಳ್ಳವುದು ವಾಡಿಕೆ. ತರಗತಿಯ ವಾರ್ಷಿಕ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಆಧಾರ ಮಾಡಿಕೊಳ್ಳವುದು ಸಾಮಾನ್ಯವಾಗಿ ಪ್ರಚಾರದಲ್ಲಿದ್ದರೂ ಈಚೆಗೆ ಆ ಕಾರ್ಯಕ್ಕಾಗಿ ಪ್ರಮಾಣೀಕರಿಸಿದ ಶಿಕ್ಷಣಾಭಿವೃದ್ಧಿ ಪರೀಕ್ಷಣಗಳೂ ಬಳಕೆಗೆ ಬರುತ್ತಿವೆ. ಡಾಲ್ಟನ್ ಶಿಕ್ಷಣದಂಥ ಕೆಲವು ಆಧುನಿಕ ಶಿಕ್ಷಣಪದ್ಧತಿಗಳಲ್ಲಿ ಒಂದೊಂದು ವಿಷಯದ ಶಿಕ್ಷಣಾಭಿವೃದ್ಧಿಯನ್ನೂ ಪ್ರತ್ಯೇಕವಾಗಿ ಪರಿಗಣಿಸಿ ಆಯಾ ವಿಷಯದಲ್ಲಿ ಸಮಾನ ಶಿಕ್ಷಣಾಭಿವೃದ್ಧಿ ಸಾಧಿಸುವವರನ್ನೆಲ್ಲ ಒಂದು ವರ್ಗವಾಗಿ ಪರಿಗಣಿಸುವುದುಂಟು. ಆ ಒಬ್ಬ ವಿದ್ಯಾರ್ಥಿ ಭಾಷೆಯಲ್ಲಿ ನಾಲ್ಕನೆಯ ತರಗತಿಯಲ್ಲಿದ್ದರೆ ಗಣಿತದಲ್ಲಿ ಒಂಬತ್ತನೆಯ ತರಗತಿಗೆ ಸೇರಿರಬಹುದು. ಅವನು ಆಯಾ ಪಾಠಕ್ಕೆ ಆಯಾ ತರಗತಿಗೆ ಹೋಗಬೇಕಾಗುತ್ತದೆ. ಶಾಲೆಯ ಕಾರ್ಯನಿರ್ವಹಣೆಯ ದೃಷ್ಟಿಯಿಂದ ಈ ವ್ಯವಸ್ಥೆ ಗೊಂದಲಕ್ಕೆ ಅವಕಾಶವೀಯುವುದರಿಂದ ಸಾರ್ವತ್ರಿಕವಾಗಿ ಎಲ್ಲೂ ಇದು ಬಳಕೆಗೆ ಬಂದಿಲ್ಲ. ಆದರೂ ಒಂದೇ ತರಗತಿಯಲ್ಲಿ ಹಲವು ಪಂಗಡ ಅಥವಾ ವಿಭಾಗಗಳನ್ನು (ಸೆಕ್ಷನ್) ಮಾಡಬೇಕಾದಾಗ ಶಿಕ್ಷಣಾಭಿವೃದ್ಧಿಯ ಜೊತೆಗೆ ಬುದ್ಧಿಶಕ್ತಿಯನ್ನು ಆಧಾರಮಾಡಿಕೊಂಡು ಎ ಬಿ ಸಿ ಡಿ ಮುಂತಾದ ಪಂಗಡಗಳನ್ನು ಏರ್ಪಡಿಸಬಹುದು. ಎ ಪಂಗಡದಲ್ಲಿ ತುಂಬ ಪ್ರತಿಭಾವಂತರೂ ಶಿಕ್ಷಣಾಭಿವೃದ್ಧಿಯಲ್ಲಿ ತೀರ ಮುಂದುವರಿದವರೂ ಇರಬಹುದು. ಮಿಕ್ಕವರನ್ನು ಅವರವರ ಬುದ್ಧಿಶಕ್ತಿ ಮತ್ತು ಶಿಕ್ಷಣಾಭಿವೃದ್ಧಿ ಇವೆರಡನ್ನೂ ಅನುಕ್ರಮವಾಗಿ ಆಧಾರ ಮಾಡಿಕೊಂಡು, ಬಿ, ಸಿ, ಮುಂತಾದ ವಿಭಾಗಗಳಲ್ಲಿ ವರ್ಗೀಕರಿಸಬಹುದು. ಇದು ಅತ್ಯಂತ ಹೆಚ್ಚು ಪ್ರಚಾರದಲ್ಲಿರುವ ವರ್ಗೀಕರಣ ವಿಧಾನ.

	4. ಸಾಮಾಜಿಕ ಬೆಳವಣಿಗೆಯ ಆಧಾರದ ವರ್ಗೀಕರಣ : ವಯಸ್ಸಿನಲ್ಲಿ ಒಂದೇ ಆಗಿದ್ದರೂ ಸಾಮಾಜಿಕ ಗುಣಗಳಲ್ಲಿ ಭಿನ್ನಮಟ್ಟ ಸಾಧಿಸಿರಬಹುದು. ದೈಹಿಕ ಬೆಳೆವಣಿಗೆ, ನೈತಿಕ ಬೆಳೆವಣಿಗೆ, ಆಸಕ್ತಿ, ಕರ್ತವ್ಯನಿಷ್ಠೆ, ಉದ್ಯೋಗಶೀಲತೆ, ಆಕಾಂಕ್ಷೆ, ಸಂಘಪ್ರಿಯತೆ- ಇವೇ ಮುಂತಾದ ಸಾಮಾಜಿಕ ಗುಣಧರ್ಮಗಳಲ್ಲಿ ಸಮಾನ ಮಟ್ಟದ ಬೆಳವಣಿಗೆ ಸಾಧಿಸಿರುವವರನ್ನೆಲ್ಲ ಒಂದು ವರ್ಗವಾಗಿ ಗುಂಪಿಸುವ ಕಾರ್ಯ ವಿನೆಟ್ಕ ಪದ್ಧತಿಯಲ್ಲಿ ಪ್ರಚಾರದಲ್ಲಿದೆ. ವರ್ಗೀಕರಣಕ್ಕೆ ಇದು ಉಚಿತವಾದ ಆಧಾರವಾದರೂ ತರಗತಿಗಳು ತೀರ ಚಿಕ್ಕವಾಗಿ ಶಿಕ್ಷಣ ಆರ್ಥಿಕ ದೃಷ್ಟಿಯಿಂದ ದುಬಾರಿಯಾಗುತ್ತದೆ. ಆದ್ದರಿಂದ ಸಾರ್ವತ್ರಿಕ ಶಿಕ್ಷಣ ವ್ಯವಸ್ಥೆಗೆ ಇದು ಎಲ್ಲೂ ಆಧಾರವಾಗಿ ಬಳಕೆಗೆ ಬಂದಿಲ್ಲ.

5. ಅಭಿರುಚಿ ಆಧಾರಿತ ವರ್ಗೀಕರಣ : ಪ್ರೌಢಶಾಲೆಗಳಲ್ಲೂ ಕಾಲೇಜುಗಳಲ್ಲೂ ವಿದ್ಯಾರ್ಥಿಗಳು ಸಾಮಾನ್ಯವಾಗಿ ತಮ್ಮ ಅಭಿರುಚಿಗೊಪ್ಪುವ ಶಿಕ್ಷಣವನ್ನು ಆರಿಸಿಕೊಳ್ಳುವುದು ಬಳಕೆಯಲ್ಲಿದೆ. ಕೆಲವು ವೇಳೆ ತರಗತಿ 20-25 ಮಂದಿಗಿಂತ ಕಡಿಮೆ ಹೊಂದಿರಬಹುದು. ಆದರೂ ಅಂಥ ತರಗತಿಗಳು ಅನಿವಾರ್ಯ. ಅಭಿರುಚಿಯನ್ನು ಶಾಸ್ತ್ರೀಯವಾಗಿ ನಿಶ್ಚಯಿಸಿ ಅವರು ಆರಿಸಿಕೊಳ್ಳಬೇಕಾದ ಐಚ್ಛಿಕ ವಿಷಯಗಳ ಬಗ್ಗೆ ಸಲಹೆ ನೀಡಲು ಎಲ್ಲ ದೇಶಗಳಲ್ಲೂ ಪ್ರೌಢಶಾಲೆಯ ಹಾಗೂ ಕಾಲೇಜಿನ ಮಟ್ಟದಲ್ಲಿ ಮಾರ್ಗದರ್ಶನ ಸಲಹಾಸೇವೆಯ ವ್ಯವಸ್ಥೆ ಏರ್ಪಡುತ್ತದೆ. ಇದು ಪ್ರೌಢಶಾಲೆಯಲ್ಲೂ ಕಾಲೇಜಿನ ಮಟ್ಟದಲ್ಲೂ ವರ್ಗೀಕರಣಕ್ಕೆ ಬಹುಮುಖ್ಯ ಆಧಾರವಾಗಿದೆ.

	6. ಅಪಸಾಮಾನ್ಯ ಮಕ್ಕಳ ವರ್ಗೀಕರಣ : ಶಾಲೆಗೆ ಬರತಕ್ಕ ಮಕ್ಕಳಲ್ಲಿ ಪ್ರತಿಭಾವಂತರೂ ಸಾಮಾನ್ಯ ಬುದ್ಧಿಯವರೂ ಇರುವಂತೆ ಮಂದಬುದ್ಧಿಯವರೂ ಬುದ್ಧಿವಿಕಲರೂ ಅಂಗವಿಕಲರೂ ಇತರ ಸಮಸ್ಯೆಯ ಮಕ್ಕಳೂ ಇರುವುದುಂಟು. ಅವರನ್ನು ಸಾಮಾನ್ಯ ಮಕ್ಕಳೊಡನೆ ವರ್ಗೀಕರಿಸಿದರೆ ಕಲಿಯುವುದು ಕಷ್ಟವಾಗುವುದಲ್ಲದೆ ಅವರ ಸಮಸ್ಯೆಗಳು ಉಲ್ಬಣಗೊಳ್ಳುತ್ತ ಹೋಗುತ್ತವೆ. ಆದ್ದರಿಂದ ವರ್ಗೀಕರಿಸುವಾಗ ಅಂಥವರ ಬಗ್ಗೆ ವಿಶೇಷ ಎಚ್ಚರಿಕೆ ಅಗತ್ಯ. ಕೆಲವು ದೇಶಗಳಲ್ಲಿ ಮಂದಬುದ್ಧಿಯ ತೀರ ಹಿಂದುಳಿದವರನ್ನು ವಿಶಿಷ್ಟ ಶಾಲೆಗಳಿಗೆ ಕಳಿಸುವುದು ವಾಡಿಕೆಯಲ್ಲಿದೆ. ಅಲ್ಲಿ ಒಂದೇ ರೀತಿಯ ಅಂಥ ಮಕ್ಕಳನ್ನು 10-15 ಸಂಖ್ಯೆಯ ತರಗತಿಗಳಾಗಿ ವಿಂಗಡಿಸಿ ವಿಶಿಷ್ಟ ಅನುಭವ ಪಡೆದಿರುವ ಅಧ್ಯಾಪಕರರಿಂದ ಪಾಠ ಹೇಳಿಸುವುದು ರೂಢಿಯಲ್ಲಿದೆ. ಆದರೆ ಅಂಥ ಶಾಲೆಗಳು ಸಂಖ್ಯೆಯಲ್ಲಿ ಕಡಿಮೆ; ದೇಶದ ಯಾವುದೋ ಮೂಲೆಯಲ್ಲಿ ಅವು ವ್ಯವಸ್ಥೆಗೊಂಡಿರುತ್ತವೆ. ಆದ್ದರಿಂದ ಪ್ರತಿಯೊಂದು ಶಾಲೆಯಲ್ಲೂ ತೀರ ಹಿಂದುಳಿದ ಮಕ್ಕಳನ್ನು ಪ್ರತ್ಯೇಕ ವರ್ಗವಾಗಿ ವಿಂಗಡಿಸಿ ಆ ತರಗತಿಗೆ ಅನುಭವವುಳ್ಳ ಅಧ್ಯಾಪಕರನ್ನು ಕಳಿಸುವುದು ವಾಡಿಕೆಯಲ್ಲಿದೆ. ಕಿವುಡರು, ಕುರುಡರು, ಮೂಗರು ಸಾಮಾನ್ಯ ಶಾಲೆಯಲ್ಲಿ ಶಿಕ್ಷಣ ಸಾಧಿಸಲಾರರು. ಅವರಿಗೆ ವಿಶಿಷ್ಟ ಶಾಲೆಗಳೇ ಬೇಕು. ಅಲ್ಲಿ 10-15 ಮಕ್ಕಳನ್ನು ಒಂದೊಂದು ವರ್ಗವಾಗಿ ವಿಂಗಡಿಸಿ ವಿಶೇಷ ರೀತಿಯಲ್ಲಿ ಶಿಕ್ಷಣ ಪಡೆದ ಅಧ್ಯಾಪಕರನ್ನು ಅದಕ್ಕೆ ನೇಮಿಸುವುದುಂಟು.

	ತೀರ ಪ್ರತಿಭಾವಂತ ಮಕ್ಕಳನ್ನು ಆರಿಸಿ ಅವರಿಗೆ ಪ್ರತ್ಯೇಕ ತರಗತಿಗಳನ್ನು ಏರ್ಪಡಿಸುವ ಸಂಪ್ರದಾಯ ಈ ಶತಮಾನದ ಉತ್ತರಾರ್ಧದಲ್ಲಿ ಆರಂಭವಾಗಿದೆ. ಮುಖ್ಯವಾಗಿ ವಿಜ್ಞಾನದಲ್ಲಿ ಅಭಿರುಚಿ ಆಸಕ್ತಿ ಉಳ್ಳ ಮಕ್ಕಳನ್ನು ಆರಿಸಿ ರಾಷ್ಟ್ರದ ವೆಚ್ಚದಲ್ಲಿ ವಿಶಿಷ್ಟ ಶಾಲೆಗಳಲ್ಲೊ ವಿಶಿಷ್ಟ ತರಗತಿಗಳಲ್ಲೊ ಶಿಕ್ಷಣವೀಯುವ ಸಂಪ್ರದಾಯ ಕಂಡುಬರುತ್ತಿದೆ. ಅಂಥವರು ರಾಷ್ಟ್ರದ ಆರ್ಥಿಕ, ಔದ್ಯೋಗಿಕ ಮತ್ತು ತಾಂತ್ರಿಕ ಕ್ಷೇತ್ರಗಳಲ್ಲಿ ಪರಿಣಾಮ ಸೇವೆ ಸಲ್ಲಿಸಬಲ್ಲರೆಂಬ ನಂಬಿಕೆಯೇ ಇಂಥ ವಿಶಿಷ್ಟ ವ್ಯವಸ್ಥೆಗೆ ಆಧಾರವೆನಿಸಿದೆ.

	ತರಗತಿಯ ವ್ಯವಸ್ಥೆ ಬೋಧನೆಗೆ ಮುಖ್ಯವಾಗಿರುವಂತೆ ಶಾಲೆಯ ಆಡಳಿತ ನಿರ್ವಹಣೆಗೂ ಮುಖ್ಯವೆನಿಸುತ್ತದೆ. ಶಾಲೆಯ ಕಾರ್ಯಕ್ರಮ ಸುಸೂತ್ರವಾಗಿ ನೆರವೇರಬೇಕಾದರೆ ಸೂಕ್ತ ರೀತಿಯ ವರ್ಗೀಕರಣ ವ್ಯವಸ್ಥೆ ಅನಿವಾರ್ಯ. ರಾಷ್ಟ್ರ ತನ್ನ ಪರಿಮಿತ ಆದಾಯದಲ್ಲಿ ಎಲ್ಲರಿಗೂ ಶಿಕ್ಷಣವೊದಗಿಸಲು ತರಗತಿಯ ವ್ಯವಸ್ಥೆ ಶಿಕ್ಷಣಾ ಸೇವಾ ವ್ಯವಸ್ಥೆಯ ಅನಿವಾರ್ಯ ಅಂಶವೆನಿಸಿದೆ. 
(ಎನ್.ಎಸ್.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ